Monday, May 30, 2011

‘ಆದಿಮ’ದಲ್ಲಿ ಚುಕ್ಕಿಮೇಳ

- ಸಿ.ವಿ.ನಾಗರಾಜ್

ಅದು ‘ಆದಿಮ’ದ ಚುಕ್ಕಿಮೇಳ-2011 ಹಾಗೂ 61ನೆ ಹುಣ್ಣಿಮೆ ಹಾಡಿನ ಸಂಭ್ರಮ. ಬುದ್ಧನಂತೆ ಹಸನ್ಮುಖಿಯಾಗಿದ್ದ ತುಂಬು ಚಂದ್ರ, ಸರಿ ಸುಮಾರು 1,500ಕ್ಕೂ ಹೆಚ್ಚು ಪ್ರೇಕ್ಷಕರು. ಮೇಕಪ್ ಮಾಡಿಕೊಂಡು ತಾವು 17 ದಿನಗಳ ಚುಕ್ಕಿ ಮೇಳದಲ್ಲಿ ಕಲಿತಿದ್ದ ಡೊಳ್ಳು ಕುಣಿತ-ಪಟ್ಟದ ಕುಣಿತ, ನಾಟಕ. ಎಲ್ಲವನ್ನೂ ತೋರಿಸುವ ಕಾತುರದಿಂದ ಕಾಯುತ್ತಿದ್ದ ಮಕ್ಕಳು ಡೊಳ್ಳನ್ನು ಹೊತ್ತು ರಂಗ ವೇದಿಕೆಗೆ ಹತ್ತುತ್ತಿದ್ದಂತೆ ಪೋಷಕರ ಕುತೂಹಲದ ಪಿಸುಪಿಸು ಕಲರವ.. ವೀಕ್ಷಕರಿಗೆ ಹೊಸ ಲೋಕಕ್ಕೆ ಬಂದಂತಹ ಅನುಭವ.. ಇಲ್ಲಿನ ತೇರಹಳ್ಳಿ ಬೆಟ್ಟದ ಮೇಲಿರುವ ಶಿವಗಂಗೆ ಗ್ರಾಮದ ಆದಿಮ ಕಲಾ ಗ್ರಾಮದಲ್ಲಿ 61ನೇ ಹುಣ್ಣಿಮೆ ಹಾಡು ಹಾಗೂ ಚುಕ್ಕಿ ಮೇಳ-2011ರ ಸಮಾರೋಪ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದು ತಮಟೆ ಕಲಾವಿದ ನಾಡೋಜ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡ.

ಅವರ ತಮಟೆ ನಾದದ ಜುಗಲ್‌ಬಂದಿ ಸುಮಾರು 20 ನಿಮಿಷಗಳ ಕಾಲ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದವು. ಆದಿಮದ ಮಕ್ಕಳು ತಾವೇನು ಕಡಿಮೆಯಿಲ್ಲ ವೆಂಬಂತೆ ಡೊಳ್ಳು ಕುಣಿತದ ಮೂಲಕ ಕಲಾಪ್ರೇಮಿ ಗಳ ಮನಸೂರೆಗೊಳಿಸಿದರು. ಜಾನಪದದ ವಿವಿಧ ಕಲಾಪ್ರಕಾರಗಳಾದ ಪೂಜಾ ಕುಣಿತಗಳು ‘ಆದಿಮ’ದ ನಡಿಗೆಯ ಪ್ರತಿಬಿಂಬದಂತೆ ಕಾರ್ಯ ಕ್ರಮಕ್ಕೆ ಮತ್ತಷ್ಟು ಮೆರಗು ತಂದವು.ಕಾರ್ಯಕ್ರಮದ ಸಂದರ್ಭದಲ್ಲಿ ‘ಆದಿಮ’ ಜೀವಕಲಾ ಶಾಲೆಯ ‘ಕಲಾಸಂಪದ’ ಪತ್ರಿಕೆಯನ್ನು ಸಿ.ಟಿ.ಒ ದೇವರಾಜ್ ಬಿಡುಗಡೆಗೊಳಿಸಿದರು. ಪತ್ರಿಕೆಯ ಕುರಿತು ಮಾತನಾಡಿದ ಡಾ.ಡಿ. ಡೊಮಿನಿಕ್ ‘ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯ ಮಣ್ಣಿನ ಸ್ಪರ್ಶದಿಂದ ದೂರವಾಗುತ್ತಿದ್ದಾನೆ. ಮಣ್ಣು ಬದುಕಿನ ಮೂಲ ಆಧಾರ ಎಂಬ ಜ್ಞಾನವನ್ನು ಅರಿತಿರುವ ನಾವು ಕಾಣದ ಬೇರೊಂದು ಮಾಯಾಜಿಂಕೆಯನ್ನು ಬೆನ್ನತ್ತಿದ್ದೇವೆ. ಅದೇ ನಮ್ಮ ಶಿಕ್ಷಣ ಮತ್ತು ಜ್ಞಾನವೆಂಬ ತಪ್ಪು ಕಲ್ಪನೆಯಲ್ಲಿ ಮುಳುಗಿ ಮಣ್ಣಿನಿಂದ ದೂರವಾಗುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೂನಿವರ್ಸಿಟಿ ಆಫ್ ಹೈದರಾಬಾದ್‌ನ ಪ್ರೊ. ಸತ್ಯವ್ರತ್ ರೌವತ್, ‘ಆದಿಮ’ದ ಹೆಜ್ಜೆಗುರುತು ಗಳನ್ನು ಕೊಲಂಬಿಯಾ ದೇಶ ಗುರುತಿಸಿದ್ದನ್ನು ವಿವರಿಸಿದರು. ‘ಆದಿಮ’ದ ನಡಿಗೆಗಳಿಂದ ಸ್ಫೂರ್ತಿ ಗೊಂಡು ‘ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಯೋಡ್ರಾಮ’ ತನ್ನ ಶಾಲೆಯಲ್ಲಿ ‘ಆದಿಮ’ ಸಂಸ್ಥೆಯ ಒಂದು ನಾಟಕವನ್ನು ಪ್ರಸ್ತುತಪಡಿಸಲು ಆಹ್ವಾನಿಸಿದೆ ಎಂದು ತಿಳಿಸಿದ ಅವರು, ಭಾರತದ ಜಾತಿ-ವರ್ಗ ವ್ಯವಸ್ಥೆಯ ಬಲಿಪಶುವಾದ ‘ಏಕಲವ್ಯ’ನ ಜೀವಂತ ಕಥೆಗಳಿಂದ ಅದೇ ಹೆಸರಿನ ನಾಟಕವನ್ನು ಜುಲೈ ತಿಂಗಳಲ್ಲಿ ಆದಿಮ ರಂಗತಂಡ ಕೊಲಂಬಿಯಾದಲ್ಲಿ ಪ್ರಸ್ತುತ ಪಡಿಸಲಿದೆ ಎಂದರು.

ರಾಮಕೃಷ್ಣ ಬೆಳ್ತೂರುರ ನಿರ್ದೇಶನದ ‘ಭೀಮಾ ದಿ ವೋಲ್ವೋ ಬಸ್’ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಹಾಭಾರತದ ಎಳೆಯಿಂದ ಪ್ರಭಾವಿತವಾದ ಸಾಮಾಜಿಕ ನ್ಯಾಯದ ನಾಟಕ ‘ಭೀಮಾ ದಿ ವೋಲ್ವೋ ಬಸ್’ನ್ನು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು. ಸಂಗೀತವೂ ಸೇರಿದಂತೆ ನಾಟಕ ಹಲವು ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾಯಿತು. ವೆಸ್ಟರ್ನ್ ಶೈಲಿಯಲ್ಲಿದ್ದ ಇಂಗ್ಲಿಷ್ ಮಿಶ್ರಿತ ಹಾಡುಗಳು ಕೇಳುಗರಿಗೆ ಹೊಸ ಅನುಭವನ್ನೀಯುತ್ತಾ ನಾಟಕಕ್ಕೆ ಮತ್ತಷ್ಟು ಕಳೆಕಟ್ಟಿದವು. ನಾಟಕದ ಹಲವಾರು ಅಂಶಗಳು ‘ಹುಣ್ಣಿಮೆ ಹಾಡಿ’ನಲ್ಲಿ ನೆರೆದಿದ್ದವರೆಲ್ಲರಿಗೂ ತಮ್ಮ ತಪ್ಪುಗಳ ಮನನಕ್ಕೆ ಎಡೆಮಾಡಿಕೊಟ್ಟವು. ಪ್ರಸ್ತುತ ಸಂದರ್ಭದಲ್ಲಿ ಸ್ವಾರ್ಥಿಯಾ ಗುತ್ತಿರುವ ಮನುಕುಲಕ್ಕೆ ಈ ನೀತಿ ನಾಟಕದ ಅಂಶಗಳು ಆತ್ಮಾವಾಲೋಕನಕ್ಕೆ ಎಡೆಮಾಡಿಕೊಡುವುದರಲ್ಲಿ ಯಶಸ್ವಿಯಾಯಿತು.

ಕ್ಲೇಷೆಗಳಿಂದ ಕೂಡಿದ ಚರಿತ್ರೆಯ ಪಾಠಗಳ ಬದಲು ಸ್ಥಳೀಯ ಚರಿತ್ರೆಯನ್ನು ಮಕ್ಕಳೇ ರಚಿಸು ವಂತೆ ‘ಲಿವಿಂಗ್ ಲೆಸೆನ್ಸ್’ನ್ನು ರೂಪಿಸಿರುವುದು ಈ ಬಾರಿಯ ಚುಕ್ಕಿಮೇಳದ ಒಂದು ವಿಶೇಷವಾಗಿತ್ತು. ಅಂತೆಯೇ, ಈ ಲಿವಿಂಗ್ ಲೆಸೆನ್ಸ್‌ಗಳನ್ನು ಬರೆಯುವ ಸಲುವಾಗಿ ಮಕ್ಕಳು ಸಮೀಪದ ಪಾಪರಾಜನಹಳ್ಳಿಯ ಜಾತ್ರೆಗೆ ಹಾಗೂ ದರ್ಗಾಗೆ ಭೇಟಿ ನೀಡಿ, ಅಲ್ಲಿ ಮಕ್ಕಳು ಪರಿಭಾವಿಸಿದ್ದನ್ನು ತಮ್ಮದೇ ಸರಳ ಭಾಷೆಯಲ್ಲಿ ನಿರೂಪಿಸಿದ್ದರು. ಈ ಪಠ್ಯಗಳನ್ನು ಕಲಾಸಂಪದ ಪತ್ರಿಕೆಯಲ್ಲಿ ಲಿವಿಂಗ್ ಲೆಸೆನ್ಸ್ ಮಾದರಿಗಳಾಗಿ ನೀಡಲಾಗಿದೆ.

‘ನಾಟಕ ನೋಡುವುದರಿಂದ ಮನಸ್ಸುಗಳು ಅರಳಬಹುದೆಂದು’ ಸೇರಿರುವ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ ಮಾತನಾಡಿದ ‘ಭೀಮಾ ದಿ ವೋಲ್ವೋ ಬಸ್’ ನಾಟಕದ ರಚನಾಕಾರರಾದ ಕೋಟಿಗಾನಹಳ್ಳಿ ರಾಮಯ್ಯ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ದಿಕ್ಕೆಟ್ಟು ಹೋಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಂದ ಕಲಿಯಬಹುದಾದ ಪಾಠಗಳನ್ನು ಗೌಣ ಮಾಡುತ್ತಾ ತಮಗೆ ಬೇಕಾದಂತೆ ಮಕ್ಕಳನ್ನು ತಯಾರಿಸಲಾಗುತ್ತಿದೆ. ಇಂತಹ ಸಂದರ್ಭ ದಲ್ಲಿ ಮಕ್ಕಳೇ ಸ್ವಯಂ ಕಲಿಕೆಯಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕಲಿಸುವುದೇ ಈ ಚುಕ್ಕಿ ಮೇಳದ ಉದ್ದೇಶವಾಗಿತ್ತು.

ಯಾರ ಬಳಿಯೂ ಬೇಡದೇ ಇರುವ ಸಂಪನ್ಮೂಲಗಳಿಂದಲೇ ಈ ಬರೀ ಈ ಬಾರಿ ಶಿಬಿರ ನಡೆದಿದೆ. ಏನೂ ಇಲ್ಲದಾಗಲೂ ಬದುಕಬಹುದೆಂಬ ಬದುಕಿನ ಹಲವಾರು ಪಾಠಗಳನ್ನು ಈ ಬಾರಿಯ ಶಿಬಿರವು ಕಲಿಸಿದೆ ಎಂದರು. ಆದಿಮದ ಹಿತೈಷಿಗಳೆಲ್ಲರೂ ಒಂದು ಕೆ.ಜಿ. ಅಕ್ಕಿಯಿಂದ ಹಿಡಿದು 6 ತಿಂಗಳವರೆಗೂ ಆಗುವ ಧವಸಗಳನ್ನು ನೀಡಿರುವುದನ್ನು ಸ್ಮರಿಸಿಕೊಂಡರು.ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಸಂಗೀತ ನಿರ್ದೇಶಕ ಇಸ್ಮಾಯೀಲ್ ಗೋನಾಳ್, ದೊರೈರಾಜ್, ಗೋವಿಂದಯ್ಯ, ಚಾನ್, ಗೌಸ್, ಮುನಿಯಪ್ಪ, ಡಿ.ಆರ್.ರಾಜಪ್ಪ, ಅಂಜಲಿ, ತೂರಂಡಹಳ್ಳಿ ಶ್ರೀನಿವಾಸ್, ಮಾರುತಿ ಪ್ರಸಾದ್, ಕಲಾದರ್ ಮೊದಲಾದ ನೂರಾರು ಆದಿಮ ಬಳಗದ ಸದಸ್ಯರು ಶ್ರಮವಹಿಸಿ ಅರ್ಥಪೂರ್ಣ ಚುಕ್ಕಿಮೇಳ-2011ಕ್ಕೆ ಸಾಕ್ಷಿಯಾದರು.

Friday, July 25, 2008

ಆದಿಮ


ಕಳೆದ ಮೂರು ದಶಕಗಳಿಂದ ವಿವಿಧ ಸಾಮಾಜಿಕ ಆಂದೋಲನಗಳಲ್ಲಿ ತೊಡಗಿದ್ದ ಕೆಲವು ಗೆಳೆಯರು ನಮ್ಮ ಸಂಸ್ಕೃತಿಯ ಜೀವಪರ ಬೇರುಗಳನ್ನು ಅರಸಿ ನೀರೂಡಿಸುವ ಕನಸು ಕಂಡರು. ಅದರ ಫಲವಾಗಿ ಕೋಲಾರ ಜಿಲ್ಲೆ ಅಂತರಗಂಗೆ ಬೆಟ್ಟದ ಮೇಲೆ ಜಿಂಕೆ ರಾಮಯ್ಯ ಜೀವತಾಣದಲ್ಲಿ ಆ ಗೆಳೆಯರು ಕೂಡಿ ಆರಂಭಿಸಿದ ನಡಿಗೆಯೇ ಆದಿಮ.

ಇರುವೆಗಳು ಗೂಡು ಕಟ್ಟುವ ಹಾಗೆ ಹತ್ತಾರು ವರ್ಷಗಳ ಕಾಲ ಎಷ್ಟೋ ಮಂದಿ ಸಮಾನ ಮನಸ್ಕರು ದಿನಕ್ಕೊಂದು ರೂಪಾಯಿಯ ಹಾಗೆ ಸಂಗ್ರಹಿಸಿದ ಮೊತ್ತವೇ ಆದಿಮದ ಮೂಲ ನಿಧಿ. ಆ ಹಣದಲ್ಲಿ ಮೊದಲಿಗೆ ಮಣ್ಣಿನ ಕುಟೀರವೊಂದನ್ನು ಕಟ್ಟಿಕೊಂಡು ಆದಿಮ ತನ್ನ ನಡೆ ಆರಂಭಿಸಿತು. ಆಗಿನಿಂದ ಜಾತಿ ಮತ ಅಂತಸ್ತುಗಳಾಚೆ, ಹೆಚ್ಚಾಗಿ ಮಕ್ಕಳ ಚಟುವಟಿಕೆಗಳ ಸುತ್ತಲೇ ಆದಿಮ ಸಾಂಸ್ಕೃತಿಕ ಎಚ್ಚರದ ದಿಕ್ಕಿನಲ್ಲಿ ಹೆಜ್ಜೆಗಳನ್ನಿಡುತ್ತ ಬಂದಿದೆ. ನಿರ್ಲಕ್ಷಿತ ಸಾಂಸ್ಕೃತಿಕ ಸಮುದಾಯಗಳ ಅಂತರಂಗದ ಚಿಲುಮೆಯಾಗಲು ಯತ್ನಿಸುತ್ತ ಆ ಸಮೂಹದ ಘನತೆಯನ್ನು ಎತ್ತರಿಸುತ್ತ ಬಂದಿದೆ.



ಸದ್ಯದ ಹಲ ಬಗೆಯ ಬಿಕ್ಕಟ್ಟುಗಳಿಗೆ ನಮ್ಮ ಸಾಂಸ್ಕೃತಿಕ ಬೇರುಗಳಲ್ಲೇ ಜೀವಪರ ಉತ್ತರಗಳನ್ನು ಹುಡುಕುವುದು ಆದಿಮದ ಆಶಯ.



ಆ ನಿಟ್ಟಿನಲ್ಲಿ ಆದಿಮ ಮಕ್ಕಳ ಸುಪ್ತ ಪ್ರತಿಭೆಗೆ ನೀರೆರೆದು ಅಗತ್ಯ ತರಬೇತಿ ನೀಡುತ್ತ ನಮ್ಮ ದಿಕ್ಕೇಡಿ ಆಧುನಿಕ ಜಗತ್ತಿನ ಸವಾಲುಗಳಿಗೆ ಅವರನ್ನು ಸಜ್ಜುಗೊಳಿಸುತ್ತಿದೆ. ಈ ನಡಿಗೆ, ಹಾಡು, ನೃತ್ಯರೂಪಕ, ನಾಟಕ ಮುಂತಾದ ಸಮೂಹ ಕಲೆಗಳ ಸಂಭ್ರಮದ ಮೂಲಕ ಸಾಕಾರಗೊಳ್ಳುತ್ತಿದೆ.

ಎಳೆಯರಷ್ಟೇ ಅಲ್ಲದೆ, ನಿರಂತರ ಸಂವಾದ-ವಾಗ್ವಾದಗಳ ಮೂಲಕ ಎಲ್ಲದರಲ್ಲೂ ಸಾಂಸ್ಕೃತಿಕ ಎಚ್ಚರ ತರುವುದು ಆದಿಮದ ಕಾಳಜಿ.

ಬನ್ನಿ, ಜೀವರಕ್ಷಣೆಗೆ ಸಮನಾದ ಈ ಪಯಣದಲ್ಲಿ ಜೊತೆಯಾಗಿ ಹೆಜ್ಜೆಯಿಡೋಣ.

ಹುಣ್ಣಿಮೆ ಹಾಡು- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ......
ಪ್ರತಿ ಹುಣ್ಣಿಮೆ ರಾತ್ರಿ ಬೆಟ್ಟದ ಮೇಲೆ ನಡೆಯುವ ಹುಣ್ಣಿಮೆ ಹಾಡು- ಆದಿಮದ ಬಹು ಮುಖ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲೊಂದು.
ನಾಟಕ, ಹಾಡು, ಹಸೆ, ನೃತ್ಯ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳ ಪ್ರದರ್ಶನ- ಹೀಗೆ ಬಹು ವಿಧದ ಕಾರ್ಯಕ್ರಮಗಳು ತಿಂಗಳು ತಿಂಗಳೂ ತಪ್ಪದೆ ನಡೆಯುತ್ತ ಬಂದಿವೆ.
ಹುಣ್ಣಿಮೆ ಹಾಡು ಇಂದು ಜಿಲ್ಲೆಯ ಸಾಂಸ್ಕೃತಿಕ ಹೆಗ್ಗುರುತುಗಳಲ್ಲೊಂದಾಗಿ ಬೆಳೆದಿರುವುದರಿಂದಲೇ ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಜನ ಸೇರಿ ಉತ್ಸಾಹದಿಂದ ಪಾಲ್ಗೊಂಡು ಹಬ್ಬದ ವಾತಾವರಣ ಸೃಷ್ಟಿಸುತ್ತಾರೆ.


ಆದಿಮ ನಡೆ- ತರಬೇತಿ, ಪ್ರಯೋಗ, ಪ್ರದರ್ಶನ
ಕಳೆದ ಸಾಲಿನಲ್ಲಿ ನುರಿತ ರಂಗಪಟುಗಳಿಂದ ಯುವಕ-ಯುವತಿಯರಿಗೆ ತರಬೇತಿ ನೀಡಿ ಆದಿಮ ಸಿದ್ಧಪಡಿಸಿದ ನೃತ್ಯ ರೂಪಕಗಳು ಮೂರು- ಹಕ್ಕಿಹಾಡು, ಕಿನ್ನರಿ ನುಡಿದೋ ಮತ್ತು ಅಣ್ಣಾ ಹಜಾರೆ. ಆದಿಮದ ಈ ಅರೆ ರೆಪರ್ಟರಿ ಐದು ತಿಂಗಳ ಕಾಲ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದೆ.
ಹೀಗೆ ಪ್ರತಿ ವರ್ಷವೂ ಒಂದೊಂದು ಹೊಸ ತಂಡ ರೂಪುಗೊಳ್ಳುತ್ತದೆ.



ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರ
1999ರಿಂದ ಚೌಕಿ ಸಂಸ್ಕೃತಿ ಕೇಂದ್ರದ ಮೂಲಕ ಪ್ರತಿ ವರ್ಷವೂ ಚುಕ್ಕಿಮೇಳ- ಮಕ್ಕಳ ಬೇಸಿಗೆ ಶಿಬಿರಗಳನ್ನು ಅತ್ಯಂತ ಸಾರ್ಥಕವಾಗಿ ನಿರ್ವಹಿಸಲಾಗುತ್ತಿದೆ. ಇದರೊಂದಿಗೆ, ಕನ್ನಡ ರಂಗಭೂಮಿಗೆ ಹತ್ತಕ್ಕೂ ಹೆಚ್ಚು ಹೊಸ ನಾಟಕಗಳು ಕೊಡುಗೆಯಾಗಿ ಸಂದಿವೆ.
ಇದೀಗ ಚುಕ್ಕಿಮೇಳವನ್ನು ಆದಿಮ ಕೇಂದ್ರದಲ್ಲೇ ಆಯೋಜಿಸಲಾಗುತ್ತಿದೆ.

ಆದಿಮ ಪ್ರಕಾಶನ
ಅರ್ಥಪೂರ್ಣ ಸಾಂಸ್ಕೃತಿಕ ಸಂವಾದದ ಆಶಯಕ್ಕೆ ಪೂರಕವಾದ ಮತ್ತೊಂದು ಚಟುವಟಿಕೆ- ಪುಸ್ತಕಗಳ ಪ್ರಕಟಣೆ. ಈ ನಿಟ್ಟಿನಲ್ಲಿ ಆದಿಮ ಪ್ರಕಾಶನ ಈವರೆಗೆ ಮಹತ್ವದ ಐದು ಕೃತಿಗಳನ್ನು ಹೊರತಂದಿದೆ:
1. ಆವರಣ ಅನಾವರಣ- ಎನ್.ಎಸ್.ಶಂಕರ್.
ಎಸ್.ಎಲ್.ಭೈರಪ್ಪನವರ ಕೋಮುವಾದಿ ಪ್ರಣಾಳಿಕೆಯ ಕಾದಂಬರಿ ಆವರಣಕ್ಕೆ
ಸಮರ್ಥ ಪ್ರತಿಕ್ರಿಯೆ. ನಾಡಿನ ಸಾಂಸ್ಕೃತಿಕ ವಲಯದಲ್ಲಿ ಹೊಸ ವಾಗ್ವಾದವನ್ನು
ಹುಟ್ಟುಹಾಕಿದ ಹೊತ್ತಗೆ.
2. ಕನಕ ಮುಸುಕು- ಡಾ.ಕೆ.ಎನ್.ಗಣೇಶಯ್ಯ
ಕನ್ನಡಕ್ಕೇ ವಿಶಿಷ್ಟವಾದ ಇತಿಹಾಸ ಸಂಶೋಧನೆ ಆಧಾರಿತ ಕೌತುಕಮಯ ಕಾದಂಬರಿ.
3. ಸಾಮಾನ್ಯನ ಸಂಕ್ರಮಣ- ಎನ್.ಎಸ್.ಹಾಲಪ್ಪ
ಸಾಮಾನ್ಯನೊಬ್ಬನ ಸ್ವಾತಂತ್ರ್ಯ ಹೋರಾಟ ಅನುಭವದ ಅಪರೂಪದ ದಾಖಲೆ.
4. ಕಾರಿಡಾರ್ ಕಾಲಕೋಶ- ಜೆಸುನಾ
ಹಿರಿಯ ಪತ್ರಕರ್ತ ಜೆಸುನಾ ನೀಡಿದ- ನಮ್ಮ ರಾಜಕೀಯ ನಾಯಕರ ದೈನಂದಿನದ ಆಪ್ತ ಚಿತ್ರಣ.
5. ಬ್ರಾಹ್ಮಣ ಧರ್ಮದ ದಿಗ್ವಿಜಯ- ಡಾ.ಬಿ.ಆರ್.ಅಂಬೇಡ್ಕರ್
ಕನ್ನಡಕ್ಕೆ:ಎನ್.ಎಸ್.ಶಂಕರ್. ಹಿಂದೂ ಚರಿತ್ರೆಯಲ್ಲಿ ಆಸಕ್ತಿ ಉಳ್ಳವರೆಲ್ಲರೂ
ಕಡ್ಡಾಯವಾಗಿ ಓದಬೇಕಾದ- ಅಂಬೇಡ್ಕರರ ಸ್ಫೋಟಕ ಸಂಶೋಧನಾ ಕೃತಿಯ
ಕನ್ನಡಾನುವಾದ.
******

ನಮ್ಮೊಂದಿಗೆ ನೀವೂ ಹೆಜ್ಜೆಗೂಡಿಸುವಂತಿದ್ದರೆ, ನೀವು
* ದಿನಕ್ಕೊಂದು ರೂಪಾಯಿ ಕೂಡಿಸಿ ನೀಡುವ ಮೂಲಕ ಆದಿಮದ ಸದಸ್ಯರಾಗಬಹುದು
* ಆದಿಮ ಕಾರ್ಯ ಚಟುವಟಿಕೆಗಳಿಗೆ ನಿಮ್ಮಿಂದಾದಷ್ಟು ಹಣದ ನೆರವು ನೀಡುವ ಮೂಲಕ ನಮ್ಮ
ಬಳಗದಲ್ಲಿ ಒಬ್ಬರಾಗಬಹುದು
* ಆದಿಮ ರೆಪರ್ಟರಿಯ ಪ್ರಯೋಗಗಳನ್ನು ಆಹ್ವಾನಿಸಿ ನಿಮ್ಮ ಶಾಲೆ/ಸಮಾರಂಭಗಳಲ್ಲಿ ಅರ್ಥಪೂರ್ಣ
ಮನರಂಜನೆ ಒದಗಿಸುವ ಮೂಲಕವೂ ಆದಿಮಕ್ಕೆ ನೆರವಾಗಬಹುದು
* ಆದಿಮ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಬಹುದು.

ನಿಮ್ಮ ಸಲಹೆ ಸೂಚನೆಗಳಿಗೂ ಸ್ವಾಗತ.


ನಮ್ಮ ಬ್ಯಾಂಕ್ ಖಾತೆ: ಕೆನರಾ ಬ್ಯಾಂಕ್, ಕೋಲಾರ
ಖಾತೆಯ ಹೆಸರು: ಆದಿಮ ಸಾಂಸ್ಕೃತಿಕ ಸಂಘಟನೆ
ಖಾತೆ ಸಂಖ್ಯೆ: 0539101025242

ನಮ್ಮ ವಿಳಾಸ:

ಆದಿಮ
ಜಿಂಕೆ ರಾಮಯ್ಯ ಜೀವತಾಣ
ಶಿವಗಂಗೆ, ಮಡೇರಹಳ್ಳಿ ಅಂಚೆ
ಕೋಲಾರ-563 101

ಫೋನ್: 08892769414

ಇ-ಮೇಲ್: adimaramaiah@gmail.com